ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಹೊರವಲಯದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮ ನಾಡಿನ ಗಮನಸೆಳೆಯಿತು.
ನಾಗಸಂದ್ರ ಬಳಿಯ ರಾಮಯ್ಯ ಬಡಾವಣೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಸಿಬ್ಬಂದಿ ಸಮೂಹದ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಪ್ರೊಡಕ್ಷನ್ ಇಂಜಿನಿಯರಿಂಗ್ ಮತ್ತು ಸರ್ವೀಸಸ್ ವಿಭಾಗದ ವತಿಯಿಂದ ರಾಮಯ್ಯ. ಬಡಾವಣೆಯಲ್ಲಿನ ವಿವಿಧ ಜನಜಾಗೃತಿ ಕಾರ್ಯಕ್ರಮದಲ್ಲಿ ಕನ್ನಡ ಸಾರಸ್ವತ ಲೋಕದ ಗಣ್ಯರು, ಕನ್ನಡ ನಾಡು-ನುಡಿಗಾಗಿ ಹೋರಾಡುತ್ತಿರುವ ಕನ್ನಡ ಸೇನಾನಿಗಳೂ ಭಾಗಿಯಾಗಿದ್ದರು.
ಮೈಲುಗಟ್ಟಲೆ ದೂರ, ಸಾಲು ಸಾಲಾಗಿ ನೂರಾರು ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಸಂಕಲ್ಪ ಮಾಡಿದ ಈ ಯುವಜನ ಸಮೂಹ, ಸಾರ್ವಜನಿರನ್ನೂ ತಮ್ಮೊಂದಿಗೆ ಸೇರಿಸಿಕೊಂಡಿತ್ತು. ‘ವೃಕ್ಷ ರಕ್ಷಾ ಕಾರ್ಯಕ್ರಮ ಆಯೋಜಿಸಿದ ಟೊಯೋಟಾ ಕಿರ್ಲೋಸ್ಕರ್ ಸಿಬ್ಬಂದಿ, ವೃಕ್ಷ ಪ್ರೇಮದ ಕೈಂಕರ್ಯವಷ್ಟೇ ಅಲ್ಲ, ಸ್ವಚ್ಚ ಪರಿಸರ ಕಾಪಾಡುವ ವಿಚಾರದಲ್ಲಿ ಸೇನಾನಿಗಳಂತೆ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಬಿಡದಿಯ ವೈಂಡ್‌ವೆಲ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಅರ್ಥಪೂರ್ಣ ಸಮಾರಂಭ ನಡೆಯಿತು. ಪ್ರಮುಖ ಉದ್ಯಾನವನಗಳ ಸಂಕೀರ್ಣ ಹಾಗೂ ಸುತ್ತಮುತ್ತ ನೈರ್ಮಲ್ಯ ಕಾಪಾಡುವ ಬಗ್ಗೆ ಫಲಕಗಳನ್ನು ಅಳವಡಿಸಲಾಯಿತು. ಕಸ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸುತ್ತಾ, ನಿವಾಸಿಗಳಿಗೆ ಮಾಹಿತಿ ನೀಡಿದ ಈ ಪರಿಸರ ಕಾರ್ಯಕರ್ತರು ಸಾರ್ವಜನಿಕರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡರು.
ಟಿಕೆಎಂ ಪ್ರೊಡಕ್ಷನ್ ಇಂಜಿನಿಯರ್ ಹಾಗೂ ಸರ್ವೀಸಸ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಜಿತೇಂದ್ರ ವಿ.ನಾಡಗೌಡ, ನಿವೃತ್ತ ಪ್ರಾದ್ಯಾಪಕ ಗೋವಿಂದಯ್ಯ, ಸಾಮಾಜಿಕ ಕಾರ್ಯಕರ್ತರೂ ಆದ ಜೆಡಿಎಸ್ ನಾಯಕ ಕೆ.ರಮೇಶ್, ದಾಸರಹಳ್ಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜು ಸಹಿತ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾರ್ಗದರ್ಶನ ಮಾಡಿದರು.























































